Friday, February 6, 2009

ರಾಮ-ರಾಜ್ಯ


ನಿನ್ನೆ ನಡೆದ ಘಟನೆ

 

ಕಮಲಾನಗರದಿಂದ ಮಲ್ಲೇಶ್ವರಂ ಗೆ ಬೆಳಗ್ಗಿನ ಬಸ್ಸ್ನಲ್ಲಿ ಹೊರಟಿದ್ದೆ, ಎಂದಿನಂತೆ ೯೬ ತುಂಬಿ ತುಳುಕುತ್ತಿತ್ತು. ಸರಕಾರದ ದೊಡ್ಡ ಗುಣದಿಂದಾಗಿ, ನಮಗೆ ಮೀಸಲಿರುವ ಆಸನದಲ್ಲಿ ಕುಳಿತುಕೊಳ್ಳಲು ಜಾಗವಂತೂ ಸಿಕ್ಕಿತು(ನನಗೆ ಅನ್ನುವದಕಿಂತ ನನ್ನ ಮಣತೂಕದ ಚೀಲಕ್ಕೆ ಅನ್ನುವುದು ಸೂಕ್ತ.). ಬಸ್ಸು ಶಂಕರ ಮಠದ ಸಮೀಪ ಬಂದಿತ್ತು. ನನ್ನ ಆಸನದ ಪಕ್ಕ ಒಬ್ಬ ಸುಮಾರು ೬೦-೬೫ ವಯಸ್ಸಿನ ವ್ಯಕ್ತಿ  ಬಂದು ನಿಂತುಕೊಂಡರು.

ಮಾನವೀಯತೆ, ತುಂಬಿ ತುಳುಕುತ್ತಾ ಇತ್ತು ನನ್ನಲ್ಲಿ. ಕೇಳೆ ಬಿಟ್ಟೆ,  "ತಾತಾ ಕುಳಿತುಕೊಳ್ಳ್ತೀರಾ" .

ತಕ್ಷಣವೇ ಬದಲಾಗಿತ್ತು ಅವರ ಮುಖ ಪ್ರಶ್ನಾರ್ಥಕಕ್ಕೆ; ತಪ್ಪಾಗಿ ಕೇಳಿದೆನೆ? ಉತ್ತರಕ್ಕಾಗಿ ಹೆಚ್ಚು ಕಾಯುವಿಕೆಯ ಅವಶ್ಯಕತೆ ಇರಲಿಲ್ಲ.   ಪುಂಖಾನು ಪುಂಖವಾಗಿ ಹೇಳುತ್ತಾ ಸಾಗುತ್ತಿದ್ದರು. ಕೂದಲು ಬೆಳ್ಳಗಾಗಿ ಅಲ್ಲಲ್ಲಿ ಉದುರಿರಬಹುದು, ಆದರೆ ಇನ್ನೂ ಗಟ್ಟಿಯಾಗಿದ್ದೇನೆ, ದಿನಕ್ಕೆ ೧೦-೧೨ ಮೈಲಿ ನಿಂತು ಸಾಗಬಲ್ಲೆ. ಯುವಕರೊಂದಿಗೆ ಸಡ್ಡುಹೊಡೆಯಬಲ್ಲೆ, ನಾನು ಈಗಿನ ಪೀಳಿಗೆಯಂತವನಲ್ಲ. . . . . . . . . . .

ಅಪರಾಧಿ ಸ್ಥಾನದಲ್ಲಿ ನಿಂತವಳಂತೆ, ಮೌನವಾಗಿ ಕೇಳಿಸಿಕೊಳ್ಳುತಿದ್ದೆ. ಮಾತು ಆಡಿ ಆಗಿದೆ. ಸಹಾನುಭೂತಿಯನ್ನು ನಿರೀಕ್ಷಸದ ಮಹಾನ್ ಗಟ್ಟಿಗನಿಗೆ ಮಾತಿನಿಂದ ಬೇಸರವಾಗಿರಬಹುದೇ?  ಕ್ಷಮೆ ಕೇಳೋಣವೆಂದು ತಲೆ ಎತ್ತಲು ಪ್ರಯತ್ನಿಸಿದೆ,ಸುತ್ತಲಿರುವ ಕಣ್ಣುಗಳು ನನ್ನೆಡೆಗೆ ದಿಟ್ಟಿಸುತ್ತಿರುವಂತೆ ಅನಿಸಿತು. ಯೇಕೂ ಮುಜುಗರ, ಗಂಟಲು ಬರಗಾಲದ ಭಾವಿ, ನನ್ನಿಂದಾದ ಪ್ರಮಾದ ಶಪಿಸುತ್ತಾ, ಕಿಟಕಿಯಿಂದಾಚೆ ದೃಷ್ಟಿ ನೆಟ್ಟೆ. ಹಿಮ್ಮೇಳದಲ್ಲಿ ಅವರ ಭಾಷಣ ಮುಂದುವರೆದಿತ್ತು.

        ಏನೋ ಹೊಸತೊಂದ ಪಡೆದ ಖುಷಿ. "How old are you" ಅಂದಾಗ "Am 45 year YOUNG" ಎಂದು ಹೇಳಿದ ಜೆನರಲ್ ಕಾರ್ಯಪ್ಪನವರ ಮಾತುಗಳು ನೆನಪಾಗುತಿತ್ತು. ಇಂತವರಿಂದ ಮಾತ್ರ ನಮ್ಮ ದೇಶ, ದೇಶದೊಟ್ಟಿಗೆ ನಾವು ಉದ್ದಾರವಾಗಬಹುದೆನ್ನುತ್ತಾ, ರಾಮ ರಾಜ್ಯದ ಕನಸಿನಲ್ಲಿ ತೇಲಿಹೂದೆ.

ಬಸ್ಸು ತನ್ನವರನ್ನ ಬರಮಾಡಿಕೊಳ್ಳುತ್ತಾ, ಕೆಲವರನ್ನ ಬೀಳ್ಕೊಡುತ್ತಾ, ದಟ್ಟಣೆಯಲ್ಲಿ ತನ್ನ ದಾರಿ ಹುಡುಕುತ್ತಾ ಮುನ್ನುಗ್ಗುತ್ತಿತ್ತು.

        "ನಿಮ್ಮ ಮನೇಲಿ ಹೆಣ್ಣುಮಕ್ಕಳಿಲ್ವಾ?" ಯೆಂಬ ದ್ವನಿ ಕೇಳಿ, ಕಲ್ಪನಾ ಲೋಕದಿಂದ ಹೊರ ಬಂದೆ. ಮಧ್ಯ ವಯಸ್ಸಿನ ಯುವತಿಯೊಬ್ಬಳು ಕಿರುಚುತ್ತಿದ್ದಳು. "ನಾಲಕ್ಕು ಕತ್ತೆ ವಯಸ್ಸಾಗಿದೆ ಚಪಲ ಇನ್ನೂ ಬಿಟ್ಟಿಲ್ವಲ್ರಿ". ಪಕ್ಕದಲ್ಲಿ ಅದೇ 60 ರ ಯುವಕ (!!!)ಕುಳಿತಿದ್ದ.  ಎಣ್ಣೆಯಲ್ಲಿ ನೆನೆದಿದ್ದ ಬೋಕ್ಕು ತಲೆಯಲ್ಲಿ, ನಾಚಿಕೆಯ ಲವ ಲೇಷವೂ ಕಾಣುತ್ತಿರಲಿಲ್ಲ,

ನನ್ನ ರಾಮ ರಾಜ್ಯದ  ಕ ನ ಸು !!!???