Friday, January 30, 2009

ಓಹ್ ಮನಸೇ....


ಹುಟ್ಟು ಸಾವಿನ ನಡುವಿನ ನಶ್ವರ ಬದುಕಿನಲ್ಲಿ ನಮ್ಮ ಅಸ್ತಿತ್ವಕ್ಕಾಗಿ ಏನೆಲ್ಲಾ ಮಾಡುತ್ತೇವೆ. ಅಸಲಿಗೆ, ನಾವು ಯಾರೆಂಬುದೇ ನಮಗೆ ತಿಳಿದಿರುವುದಿಲ್ಲ. ಇಲ್ಲಿ ನಾನು ಕೇವಲ ನಾನಲ್ಲ, ಪ್ರತಿಯೊಬ್ಬರೊಳಗೆ ಅಡಗಿರುವ ಗುಪ್ತ ಮನಸ್ಸು.

ಪ್ರತಿಯೊಂದು ಅರ್ಜಿ-ಪತ್ರಗಳನ್ನು ತುಂಬುವಾಗ, ಹೆಸರು, ವಯಸ್ಸು ಮುಂತಾದವುಗಳ ನಂತರ ಬರುವ " ನಿಮ್ಮ ಬಗ್ಗೆ", ನನ್ನ  ಜಂಘಾ ಭಲವನ್ನೇ ಅಲುಗಿಸಿಬಿಡುತ್ತೆ.

Am what I am ಅಂತ ಎಲ್ಲರಂತೆ ಬರೆಯಲೋ, ಅಥವಾ ನಾನು ಹಾಗೆ-ನಾನು ಹೀಗೆ ಎಂದು ಸತ್ಯದ ತಲೆ ಮೇಲೆ ಹೊಡೆದವರಂತೆ ಸುಳ್ಳಿನ ಸರಮಾಲೆ ಕಟ್ಟಲೆ ?. ಏನೆಂದು ಬರೆಯಲಿ, ಏನೆಂದು ವಿವರಿಸಲಿ ನನ್ನ ಬಗ್ಗೆ?.

ಹುಟ್ಟು ಅನಿವಾರ್ಯ-ಸಾವು ಖಚಿತ. ಹುಟ್ಟಿನ ರಹಸ್ಯ  ಬೆದಿಸಲಾರದ ಅಸಹಾಯಕಿ ಎನ್ನಲೇ?, ಸಾವಿಗೆ ಹೆದರದ ಧೈರ್ಯವಂತೆ ಎನ್ನಲೇ?. ಆಗತಾನೆ ಪ್ರಾರ್ಥನೆ ಮುಗಿಸಿದ ಮಂದಿರ, ಮಸೀದಿ,ಚರ್ಚಗಳ ಜನಸ್ತೋಮದ  ಮಧ್ಯೆ ಕಳೆದುಹೋದ ಅನಾಥೆ, ಗುಜರಿಯಂಚಿನಲ್ಲಿ ನಿಂತ ಹಳೆ ಸ್ಕೂಟರಿನ ಪಕ್ಕ ಹಾದುಹೋಗಲಂಜಿ  ರಸ್ತೆ ಬದಲಿಸುವ ಪುಕ್ಕಲಿ,  ಬಸ್ಸಿಗಾಗಿ ಕಾಯುತ್ತಿರುವಾಗ ಪಕ್ಕದಲ್ಲಿ ನಿಂತವನ ಕುಡಿಮೀಸೆಯಂಚಿನಲ್ಲಿರುವ ಕಪಟ ನಗುವಿವ ವಸ್ತು, ಕಾಪಾಡಲಾರನೆಂದು ತಿಳಿದೂ ಭಗವಂತನಿಗೆ ಅಡ್ಡಬೀಳುವ ಆಸ್ತಿಕ, ಹಿಡಿ ಪ್ರೀತಿಗಾಗಿ ಕಾದಿರುವ  ಚಾತಕ ಪಕ್ಷಿ, ಪಡ್ಡೆ ಹುಡುಗರ ಹೃದಯ ಕದಿಯುವ ಕಳ್ಳಿ. ಸುಳ್ಳು ಮೋಸ ಅರಿಯದ ದಡ್ಡಿ.

ಹಾಗಾದರೆ ಇದೆಲ್ಲ ನನ್ನೊಳಗೆ ಇರುವ  ನನ್ನ ಮನಸ್ಸಾ?